Thursday, March 17, 2011

ವನಶ್ರೀ





Pic shows Sunrise In My Native, its one of the pic captured when i went for searching peacocks  @ The time of sunrise & sunset we can find many Peacocks without any risk. but now a days its difficult to find them.

ಹಾಯ್ ಮಯೂರಿ ,ಎಲ್ಲೇ ಹೋಗಿದ್ದೆ ಇಷ್ಟು ದಿನ ?  ನನ್ನನ್ನು ಒಂಟಿಯಾಗಿ ಬಿಟ್ಟು ನೀನು ನಿನ್ನ ಸಂಗಡದವರ ಜೊತೆ ಆರಾಮವಾಗಿದ್ದೆಯಲ್ಲೇ!!  ಮೊದಲು ನಾನು ಅಡಿಯಿಟ್ಟಲ್ಲೆಲ್ಲಾ ನೀನು ನಿನ್ನ ಮುಖಾರವಿಂದವನ್ನು ತೋರಿಸುತ್ತಿದ್ದವಳು,  ಈಗ ನಾನು ಎಷ್ಟು ಗೋಗರೆದರೂ ನೀನು ಬಿಲ್ ಕುಲ್  ಸಿಗುವುದಿಲ್ಲ.

ನಾನು ಸಣ್ಣವನಿದ್ದಾಗ ಎಲ್ಲೆಂದರಲ್ಲಿ, ಊರಾಚೆಯ ತೋಟದಲ್ಲಿ, ನಮ್ಮೂರಿನ ಗೋಮಾಳದಲ್ಲಿ, ದೊಡ್ಡ ಕೆರೆ ತುಂಬಿ ಹರಿದಾಗ ಆ ಸೇತುವೆಯ ಹತ್ತಿರ, ಅದರ ಪಕ್ಕದಲ್ಲೇ ಇದ್ದ ಮಾವಿನ ತೋಪಿನಲ್ಲಿ ಊರು ಹೊರಗಿನ ದೇವಸ್ಥಾನದ ಸುತ್ತ ಮುತ್ತಲಿನಲ್ಲಿ ನೀನು ಸಿಗುತ್ತಿದ್ದೆ. ನನ್ನೂರಿಗೆ ತುಂಬಾ ಹತ್ತಿರವಿರುವ "ಕರ್ನಾಟಕದ ನವಿಲು ಅಭಯಾರಣ್ಯ" ಎಂದೇ ಪ್ರಸಿದ್ದವಾದ ಆದಿಚುಂಚನಗಿರಿಯಲ್ಲಿ  ನಿನ್ನದೇ ಆದ ರಾಜ್ಯಭಾರವಿದ್ದ ಒಂದು ಕಾಲವಿತ್ತು. ಆದರೆ ಇಂದೇಕೆ ಹೇಡಿಯಂತೆ ಅಡಗಿ ಕುಳಿತಿರುವೆ ??  ಅಥವಾ ಯಾಕೆ ಇವರ ಸಹವಾಸ ? ಎಂದು ಜಾಗ ಖಾಲಿ ಮಾಡಿರುವೆಯಾ  ?? ನನಗೊತ್ತು ಬಿಡು. ಇದಕ್ಕೆಲ್ಲ  ಕಾರಣ ನನ್ನ ಅಜ್ಜನ ಕಾಲಕ್ಕೂ ನಮ್ಮ ಕಾಲಕ್ಕೂ ಆಗಿರುವ ಪ್ರಕೃತಿ ಬದಲಾವಣೆ. ಸಂಪೂರ್ಣ ಆಧುನಿಕತೆಯ ಸ್ಪರ್ಶ!!!  ಗುಹೆಗಳಂತಿದ್ದ   ಕಾಡುಗಳು ಮಾಯವಾಗಿ  ಈಗ ಮರ್ಕ್ಯುರಿ ಲೈಟುಗಳಿಂದ ತುಂಬಿರುವ ಟಾರ್ ರಸ್ತೆಗಳು , ಬೃಹತ್ ಕಟ್ಟಡಗಳು  ಅಲ್ಲವಾ?? ನಿನ್ನನ್ನು ಇನ್ನು ಮುಂದೆ ಯಾವುದಾದರು ಡಿಜಿಟಲ್ ಕ್ಯಾಮೆರಾದಿಂದ ಸೆರೆ ಹಿಡಿದ ವೀಡಿಯೊದಲ್ಲಿ ನೋಡಬೇಕಾದೀತು !! ಯಾಕೆ ಹೇಳು?? ಆಧುನಿಕತೆ!!!

"ವಸುಂಧರಾ ನೀ ಎಷ್ಟು  ಸುಂದರಾ ??" ಎಂಬ ಮಾತು ಪರಿಪೂರ್ಣವಾಗಬೇಕಾದರೆ ನಿಸರ್ಗದ ಪಾತ್ರ ಮುಖ್ಯವಾದುದು.ಅದು ನೀರು ಮತ್ತು ಮಣ್ಣಿನಿಂದ ಕಂಗೊಳಿಸುವ ವನಶ್ರೀ . ನಿಸರ್ಗವನ್ನು ಕುರಿತ ಉತ್ಕಟವಾದ ಹಂಬಲ ಕೇವಲ ಸೌಂದರ್ಯಷ್ಟವಾದುದು ಮಾತ್ರವಲ್ಲ  ಅದನ್ನೂ ಮೀರಿದ ಆಧ್ಯಾತ್ಮಿಕ ಅನ್ವೇಷಣೆಯ ಪರಿಣಾಮ ಕೂಡ.

"ಬಹುರತ್ನಾ ವಸುಂಧರಾ" ಎಂಬಂತೆ ತನ್ನಲ್ಲಿರುವ ಅಪಾರ ಸಂಪತ್ತನ್ನು ಯಾವ ನಿಷ್ಪಕ್ಷಪಾತವೂ ಇಲ್ಲದೆ ಮಾನವನಿಗೆ ಧಾರೆಯೆರೆಯುತ್ತಾ ಬಂದಿದ್ದಾಳೆ. ಜೀವನ ವಿಕಾಸ,ಸೃಷ್ಟಿಯಿಂದ ವಿಜ್ರಂಭಿಸುವ ಜೀವನ ಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನ ಪರಿಸ್ಥಿತಿಯ ತಾಕಲಾಟಕ್ಕೆ ಸಿಲುಕಿದ ಮಾನವ ಎಲ್ಲವನ್ನು ನಾಶ ಮಾಡುತ್ತಾ ಬಂದಿದ್ದಾನೆ ಕೊನೆಗೆ ತನ್ನನ್ನು ತಾನೇ ನಾಶ ಮಾಡಿಕೊಳ್ಳುತ್ತಾನೆ ಅದರಲ್ಲಿ ಸಂದೇಹವಿಲ್ಲ.

ಯಾವುದೇ ಬೌದ್ಧಿಕ ಜಿಜ್ನಾಸೆಯ ತಾತ್ವಿಕ,ವೈಚಾರಿಕ, ವಿಶ್ಲೇಷಣೆಗಳ ಹಂಗಿಲ್ಲದೆ ಬದುಕು ಸಾಗಿಸುತ್ತಿರುವ ಮಾನವ ಸ್ವಾರ್ಥಿಯಾಗಿದ್ದಾನೆ !! ಅಪಾರವಾಗಿ ಬೆಳೆದು ನಿಂತಿದ್ದ ಕಾಡಿನೊಳಗೆ ನೀರು, ಕಾಡು, ಮೇಡು, ಗಿರಿಧಾಮ ಎಲ್ಲೆಂದರಲ್ಲಿ ನೀನು ವಾಸಿಸುತ್ತಿದ್ದೆ. ಯಾವಾಗ ಬೇಕಾದರೂ ಸಿಗುತ್ತಿದ್ದೆ. ದಾರಿಯೇ ಇಲ್ಲದ ಊರುಗಳು, ಸೂರ್ಯನ ಕಿರಣ ಪ್ರವೇಶಿಸಲಾರದಷ್ಟು ದಟ್ಟವಾಗಿದ್ದ ಕಾಡುಗಳು ಇಂದು ಬಟಾಬಯಲಾಗಿವೆ, ನೀನು ಕಣ್ಮರೆಯಾಗಿದ್ದಿಯ !!

ಅರಣ್ಯದ ಜೊತೆಗೆ ಇಂದಿನ ನಮ್ಮ ಸಮಾಜ ಏನಾಗಿದೆ?? ಜಾಗತಿಕರಣಕ್ಕೆ ಅವಕಾಶ ಕೊಟ್ಟ ನಂತರ ನಮ್ಮ ಪವಿತ್ರ ನಾಡಲ್ಲಿ ನಡೆದದ್ದೇ(??) ಬೇರೆ. ಸಾಹಿತ್ಯರಾಧನೆ,ಕಲೋಪಾಸನೆ,ಆಧ್ಯಾತ್ಮ ,ವೈಚಾರಿಕತೆ,ಗಾಢವಾದ ನಿಸರ್ಗ ಪ್ರೀತಿ, ಪರಂಪರೆ, ಸಂಸ್ಕೃತಿ, ಸಮ್ಮೋ ಹಕಗಳ ತಾಣವಾಗಿದ್ದ ನಮ್ಮ ನಾಡು,ಸಮಾಜ ಇಂದು ಪಾಶ್ಚಿಮಾತ್ಯತೆಗೆ ಮಾರು ಹೋಗಿದೆ. ಇತ್ತ ಪೂರ್ತಿ ದೇಶೀಯರೂ ಅಲ್ಲದೇ ಅತ್ತ ಪೂರ್ತಿ ವಿದೀಶೀಯರು ಅಲ್ಲದೆ ಬದುಕುವಂತಾಗಿದೆ. ನಮ್ಮತನ ನಾಶವಾಗಿದೆ. ಇದಾವುದಕ್ಕೂ ತನಗೂ ಸಂಬಂಧವಿಲ್ಲವೆಂಬಂತೆ ಇನ್ನೊಂದು ಕಡೆ ಭೂಗತ ಚಟುವಟಿಕೆಗಳು,ಸರಣಿ ಬಾಂಬ್ ಸ್ಪೋಟ,ಕಾಳಹಣ, ಬಾಲಿವುಡ್, ಕೋಮುದಂಗೆ, ಭ್ರಷ್ಟಾಚಾರ, ನಕ್ಸಲ್ ಚಟುವಟಿಕೆ ಇವುಗಳ ಆರ್ಭಟ ನಿರಾತಂಕವಾಗಿ ನಿರಂತರವಾಗಿ ನಡೆದಿದೆ.

ಇದೆಲ್ಲ ಸಂಪೂರ್ಣವಾಗಿ ನಿಲ್ಲಬೇಕೆಂದರೆ ಅರಣ್ಯಾನುಭವಗಳೇ ಮೂಲದ್ರವ್ಯದ ಸರ್ವವ್ಯಾಪಿಯಾಗಬೇಕು. ಸರ್ವೋದಯ, ಸಮನ್ವಯ ಮತ್ತು ಪೂರ್ವದೃಷ್ಟಿಯ ಬೆಳಕಿನಲ್ಲಿ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗಬೇಕು. ಮಯೂರಿ ??? ಇದೆಲ್ಲ ನಿನಗೆ ಅರ್ಥವಾಗುವುದಿಲ್ಲ ಈ ಸಲ ಕಾಲೇಜಿನ ಕೈಪಿಡಿ ಬಿಡುಗಡೆ ಮಾಡುತ್ತಿದ್ದಾರೆಂದು ತಿಳಿಯಿತು. ಖುಷಿಯಿಂದ ಒಂದು ಅಂಕಣ ಬರೆಯೋಣವೆಂದುಕೊಂಡು ಊರಿಗೆ ಹೊರಟೆ, ನೀನು ಎದುರಾದೆ. ಹೇಳಬೇಕೆನಿಸಿದ್ದೆಲ್ಲವನ್ನೂ ಹೇಳಿದೆ.ಆದರೆ ನಿನಗೆ ನನ್ನದೇ ಧಿಮಾಕು !!ನೀನು ಬೆನ್ನು ತಿರುಗಿಸಿ ಧಿಮಾಕು ತೋರಿಸಿ ತಿರುಗಿ ನೋಡದೆ ಹೊರಟು ಹೋದೆ!! ನಾನೂ ನಿನಗೆ ವಿದಾಯ ಹೇಳುತ್ತಿದ್ದೇನೆ.. ಮತ್ತೆ ಸಿಗುತ್ತೇನೆ ಎಂದು ಹೇಳಿ ಹೋದವಳು ಇವತ್ತಿಗೂ ಮತ್ತೆ ಸಿಗಲಿಲ್ಲ . ಮತ್ತೆ ಸಿಗುತ್ತಿಯಾ ಎಂಬ ನಂಬಿಕೆ ಇದೆ.. ನಿನ್ನ ಹತ್ತಿರ ಮತ್ತಷ್ಟು ಹೇಳುವುದಿದೆ.. ನಾನೂ ಮತ್ತೆ ಸಿಗುತ್ತೇನೆ!!!

ಪರಂಪರೆ,ಸಮಾಜ, ಅರಣ್ಯದಲ್ಲಾದ ಸಂಕ್ರಮಣವನ್ನು  ತಿಳಿಸುವ ಒಂದು ಸಣ್ಣ ಪ್ರಯತ್ನ ||
ಮಯೂರಿ==ನಮ್ಮೂರಿನಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ನವಿಲು || ವನಶ್ರೀ==ಅರಣ್ಯ ಸಂಪತ್ತು

This article has been printed in Shri-Utsav Magzine Sinchana-2008 in SIET,Tumkur

2 comments:

  1. ಚೆನ್ನಾಗಿ ಹೇಳಿದ್ದೀರಿ ದೇವರಾಜ್, ಮಾನವನಿಂದ ಪ್ರತಿಫಲವನ್ನು ಬಯಸದೆ ಪ್ರಪಂಚವನ್ನು ಸಲಹುವುದೇ ಪ್ರಕೃತಿ ಹಾಗೂ ಪ್ರಾಣಿಸಂಕುಲ ...

    ReplyDelete
  2. howdu sir.. khanditavaagiyu prakrutiye prana devate..

    ReplyDelete