Sunday, July 24, 2016

ಹುಲುಕಡಿ ಬೆಟ್ಟ ಚಾರಣ

'ಕಾವೇರಿಯಿಂದಮಾ ಗೋದಾವರಿಮಿರ್ದ ನಾಡದಾ ಕನ್ನಡದೊಳ್' ಎಂಬ ನಾಣ್ಣುಡಿಯಂತೆ ಒಂದು ಕಾಲದಲ್ಲಿ ನಮ್ಮ ಕರ್ನಾಟಕ ಕಾವೇರಿಯಿಂದ ಹಿಡಿದು ಗೋದಾವರಿಯವರೆಗೂ ಹಬ್ಬಿತ್ತು. ಅದೆಶ್ಟೋ ಬೆಟ್ಟ-ಗುಡ್ಡ, ಕಾಡು-ಕಣಿವೆ, ಗಿರಿ-ಕಂದರ, ಕೋಟೆ-ಕೊತ್ತಲಗಳಿಂದ ತುಂಬಿರುವ ನಾಡು ನಮ್ಮ ಹೆಮ್ಮೆಯ ಸುಂದರ ನಾಡು.

ಈ ಸಲ ನಮ್ಮ ಚಾರಣ-ಸುತ್ತಾಟ ತಂಡ ಯೋಜನೆ ಹಾಕಿದ್ದು ದೊಡ್ಡಬಳ್ಳಾಪುರ ತಾಲೂಕಿನ ಹುಲುಕಡಿ ಬೆಟ್ಟಕ್ಕೆ. ಶಿವಪ್ರಸಾದ್ ರವರು ಮೊದಲೇ ಹೋಗಿ ಅಲ್ಲಿನ ಸ್ಥಳೀಯರಲ್ಲಿ ವಿಚಾರಿಸಿ, ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿ, ಬೆಟ್ಟದ ಮೇಲೆ ಉಳಿದುಕೊಳ್ಳಲು ಅನುಮತಿ ಪಡೆದು, ಬೈಕು-ಕಾರುಗಳ ಪಾರ್ಕಿಂಗ್, ಭಾನುವಾರ ಬೆಳಗಿನ ತಿಂಡಿಗೆ ವ್ಯವಸ್ತೆ ಮಾಡಿದ್ದರು. ಹುಲುಕಡಿ ಬೆಟ್ಟಕ್ಕೆ ಚಾರಣ ಬರುವವರಿಗೆಲ್ಲ ಗೊರಗುಂಟೆ ಪಾಳ್ಯದ ಬಳಿ ಸೇರುವ ಹಾಗೆ ಹೇಳಿದ್ದೆವು. ಸಮಯವನ್ನು ೨:೩೦ ಗಂಟೆಗೆ ನಿಗದಿಪಡಿಸಿದ್ದರೂ ಎಲ್ಲರೂ ಬರುವ ಹೊತ್ತಿಗೆ ೩:೩೦ - ೪:೦೦ ಆಯಿತು, ಮೊದಲು ಬಂದ ಬಂದವರನ್ನು ೨-೩ ತಂಡಗಳಾಗಿ ಮುಂದೆ ಹೊರಡುವಂತೆ ಸೂಚಿಸಲಾಯಿತು. ಹೀಗೇ, ನೆಲಮಂಗಲ ವೃತ್ತದ ಬಳಿ ಬಲ ತಿರುವು ಪಡೆದು ಕನಸವಾಡಿ ದಾರಿಯ ಕಡೆಗೆ ನಮ್ಮ ಪಯಣ ಹೊರಟಿತ್ತು.ದಾರಿ ಮಧ್ಯ ಸಣ್ಣ ಸಣ್ಣ ಹನಿ ಮಳೆಯೂ ಬಂತು, ದೊಡ್ಡಬೆಳವಂಗಲದಿಂದ ಎಡ ತಿರುವು ತೆಗೆದುಕೊಂಡು ಭಕ್ತರಹಳ್ಳಿ ದಾಟಿ ಅಲ್ಲೊಂದು ತಿರುವಿನಲ್ಲಿ ಎಲ್ಲರೂ ಒಟ್ಟುಗೂಡಿದೆವು.


ಅಲ್ಲಿಂದ ಮಂದೆ ಸಾಗಿ ಬೆಟ್ಟದ ಬುಡ ತಲುಪಿದೆವು, ಎಲ್ಲ ಬೈಕು, ಕಾರುಗಳನ್ನು ಒಂದು ಕಡೆ ಸಾಲಾಗಿ ನಿಲ್ಲಿಸಿ, ಚಾರಣಕ್ಕೆ ಅಣಿಯಾದೆವು. ಬೆಟ್ಟದ ಬುಡದಲ್ಲಿ ನಿಂತು ಹುಲುಕಡಿ ಬೆಟ್ಟವನ್ನು ನೋಡಿದರೆ ಬೃಹದಾಕಾರವಾಗಿ ಕಾಣುತ್ತಿತ್ತು. ಆದರೆ ನಾವು ಹತ್ತುವುದಕ್ಕೆ ಆಯ್ಕೆ ಮಾಡಿದ್ದ ದಾರಿ ಎಲ್ಲರೂ ಬಳಸುವ ಮೆಟ್ಟಿಲುಗಳಿದ್ದ ದಾರಿ. ಇದು ಸುಲಭ ದಾರಿ. ಸ್ವಲ್ಪ ಮಳೆ ಮೋಡಗಳು ಇದ್ದವೇ ಹೊರತು ಮಳೆ ಬರುವ ಯಾವ ಮುನ್ಸೂಚನೆಯೂ ಇರಲಿಲ್ಲ.

ಎಲ್ಲರೂ ಒಂದೆಡೆ ಕೂಡಿ, ಎಲ್ಲ ವ್ಯವಸ್ತೆಗಳನ್ನು ಪರಿಶೀಲಿಸಿಕೊಂಡು ಚಾರಣ ಶುರು ಮಾಡುವ ಹೊತ್ತಿಗೆ ೬ ಗಂಟೆ ಆಗಿತ್ತು. ಎಲ್ಲರೂ ಹುಮ್ಮಸ್ಸಿನಿಂದ ಬೆಟ್ಟ ಹತ್ತಲು ಶುರು ಮಾಡಿದರು. ಮೆಟ್ಟಿಲುಗಳಿದ್ದ ಕಾರಣ ಸುಲಭವಾಗಿ ಅರ್ಧ ಬೆಟ್ಟ ಹತ್ತಿ ಮುಗಿದೇ ಹೋಯಿತು. ಮತ್ತೆ ಅಲ್ಲಲ್ಲೇ ಗುಂಪು ಗುಂಪಾಗಿ ಕುಳಿತು ಪಟ, ಸೆಲ್ಫೀ, ಹರಟೆ ಶುರು ಆಗಿತ್ತು. ಹಾನರ್ ಪೋನಿನ ವಿಶಯ ಆಗಾಗ ಬಂದು ಹೋಗುತ್ತಿತ್ತು. ಎಡ ಭಾಗದ ದೊಡ್ಡ ಬಂಡೆಯ ಮೇಲೆ ಜೇನು ಗೂಡುಗಳ ಗುಂಪೇ ಇತ್ತು. ಅರ್ಧ ಬೆಟ್ಟದ ಮೇಲೆ ನಿಂತು ನೋಡಿದರೆ, ಗಗನಸದೃಶ್ಯವಾದ, ಅಚ್ಚ ಹಸಿರು, ಸುತ್ತ ಮುತ್ತಲ ಬೆಟ್ಟಗಳು, ಹೈ ಟೆನ್ಶನ್ ತಂತಿ ಎಳೆಯಲು ಈಗ ತಾನೆ ನಿರ್ಮಾಣವಾಗುತ್ತಿರುವ ಬೃಹದಾಕಾರವಾದ ಕಂಬಗಳು ಕಂಡವು. ಮಳೆಯ ಯಾವ ಸೂಚನೆ ಇಲ್ಲದ್ದರಿಂದ ಬೇಗ ಮೇಲೆ ಜಾಗ ತಲುಪಿ ಟೆಂಟ್ ಹಾಕೋಣ ಎಂದು ಮುಂದೆ ಮುಂದೆ ಸಾಗಿದೆವು.

ಹುಲುಕಡಿ 
---------------
ಮೇಲೆ ಹತ್ತುತ್ತಲೇ ಒಂದು ಸ್ವಲ್ಪ ಸಮತಟ್ಟಾದ ಜಾಗಕ್ಕೆ ಬಂದೆವು, ಅಲ್ಲಿ ಕಂಡಿದ್ದು ಬಂಡೆಗಳ ನಡುವೆ ನಿರ್ಮಿತವಾದ ಒಂದು ಕೊಳ, ಅದುವೇ ಬಿಂದು ಸರೋವರ ಅದು ೨ ಭಾಗವಾಗಿತ್ತು, ನಮ್ಮ ಜೊತೆ ಸ್ಥಳೀಯರೂ, ಆ ಬೆಟ್ಟದಲ್ಲಿರುವ ದೇವಸ್ಥಾನಗಳ ಅರ್ಚಕರೂ ಆದ ಅರುಣ್ ಇದ್ದರು. ಅವರನ್ನು ಕೇಳಿದಾಗ ಅವರು ಹೇಳಿದ್ದು ಒಂದು ಭಾಗದಲ್ಲಿ ಬಂದ ಜನರು ಸ್ನಾನ ಮಾಡಲು ಉಪಯೋಗಿಸುತ್ತಾರೆ, ಇನ್ನೊಂದು ಭಾಗ ದೇವರ ಪೂಜೆಗೆ ಮೀಸಲು ಎಂದು ಹೇಳಿದರು.

ಅಲ್ಲಿಂದ ಮೇಲಕ್ಕೆ ಇನ್ನೂ ೨೫% ಬೆಟ್ಟವಿತ್ತು, ಕತ್ತಲು ಸ್ವಲ್ಪ ಸ್ವಲ್ಪವಾಗಿ ಆವರಿಸುತ್ತಿತ್ತು. ಕೊಳದಿಂದ ಮೇಲಕ್ಕೆ ಒಂದು ದಾರಿ ಸಾಗುತ್ತದೆ.

೧) ಬಲಭಾಗದಲ್ಲಿ ಬೆಟ್ಟಕ್ಕೆ ಕಳಸವೆಂಬಂತೆ ಒಂದು ಉದ್ದನೆಯ ಬಂಡೆ ಇದೆ, ಆ ಬಂಡೆಯ ಕೆಳಗೆ ಒಂದು ಚಿಕ್ಕ ಗುಡಿ, ಅದರೊಳಗೆ ಒಂದು ಶಿವಲಿಂಗ ಮತ್ತು ಭದ್ರಕಾಳಿಯ ವಿಗ್ರಹಗಳಿದೆ. ಇಲ್ಲಿ ಅಗಸ್ತ್ಯ ಮಹಾಮುನಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿದ ಲಿಂಗವೆಂಬ ನಂಬಿಕೆ ಇದೆ. ಆ ಶಿವಲಿಂಗವು ಕೊಂಚ ವಿಭಿನ್ನ, ಮೇಲಿನ ಬಂಡೆಯ ತದ್ರೂಪ.

೨) ಎಡಭಾಗಕ್ಕೆ ತಿರುವು ಪಡೆದು ಮೇಲೆ ಸಾಗಿದರೆ ಅಲ್ಲಿ ವೀರಭದ್ರನ ಗುಡಿ ಸಿಗುತ್ತದೆ. ಇದೇ ದಾರಿಯಲ್ಲಿ ಯಾರೋ ಪುಣ್ಯಾತ್ಮರು ಬಂಡೆಗಲ್ಲಿನ ಮೇಲೆ ಒಂದು ಗೊಂಬೆ ಚಿತ್ರ ಬರೆದು 'ಶಿವಣ್ಣ' ಎಂದು ಕೆತ್ತಿದ್ದರು, ಒಂದೆರಡು ಪಟ, ಸೆಲ್ಫಿ ತಗೊಂಡು ಮುಂದೆ ಸಾಗಿದೆವು, ಮುಂಚೆ ಹೋದವರೆಲ್ಲಾ ಕುಳಿತು ವಿಶ್ರಮಿಸಲು ಸ್ವಲ್ಪ ಜಾಗ ಸಿಕ್ಕಿತು ಎಂದು ಅಲ್ಲೇ ಠಿಕಾಣಿ ಹೂಡಿದ್ದರು. ಅಷ್ಟರಲ್ಲಿ ಟೆಂಟ್ ಹಾಕಲು ಪುಟ್ಟ ಮತ್ತು ಅರುಣ್ ಪಸಂದಾಗಿರುವ ಜಾಗ ನೋಡಿ ಬಂದಿದ್ದರು. ಎಲ್ಲ ಆ ಕಡೆ ಸಾಗಿದೆವು.

ಒಂದೊಂದಾಗಿ ಟೆಂಟ್ ಹೊಡೆಯುತ್ತಿರವಾಗಲೇ ಸಣ್ಣ ಸಣ್ಣ ಮಳೆ ಹನಿ ಶುರು ಆಯಿತು. ಅಲ್ಲಾ ಸಿವ ಈಗ ಮಳೆ ಬಂದ್ರೆ ಏನ್ ಕಥೆ ??. ತೆಗೆದುಕೊಂಡು ಹೋಗಿದ್ದ ೧೧ ಟೆಂಟ್ ಗಳಲ್ಲಿ ೮ ಹೊಡೆದಿದ್ದೆವು, ಟೆಂಟ್ ಕವರಿನೊಳಗೆ ತುಂಬಿದ್ದ ಬಿಸ್ಕೇಟು, ಕೇಕು ತೆಗೆಯುವ ಭರದಲ್ಲಿ ಯಾರೋ ಟೆಂಟ್ ಕವರ್ ಗಳನ್ನು ತೆಗೆದು ಹಾಕಿದ್ದರು. ನೋಡು ನೋಡುತ್ತಿದ್ದ ಹಾಗೆ ಮಳೆ ಜೋರಾಗಿಯೇ ಬಿಡ್ತು, ಇನ್ನೂ ೩ ಟೆಂಟ್ ಅಲ್ಲೇ ಕವರ್ ಇಲ್ಲದೇ ಚಳಿಗೆ ನಡುಗುತ್ತಿದ್ದವು, ಹೊರಳಾಡಿ ನ್ಯಾಯ ಕೇಳುತ್ತಾ ಧರಣಿ ಕುಳಿತಿದ್ದವು. ಪುಟ್ಟ ಅದನ್ನು ನೋಡಿ, ನಂಗೂ ಗಿರೀಶ್ ಗೂ ಮಂಗಳಾರತಿ ಮಾಡಿದರು. ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಸಿಕ್ಕ ಸಿಕ್ಕ ಬಂಡೆಗಳ ಕೆಳಗೆ ಮಳೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದರು.

ರಾಗಿ ಗಂಜಿ with ಕಲರ್ ಕೊಡೆ
---------------------------------------
ಮಳೆ ನಿಲ್ಲಬಹುದೇನೊ ಅನ್ನುವ ನಂಬಿಕೆಯಿಂದಲೇ ಒಂದೊಂದು ಕಡೆ ಕುಳಿತು ಹರಟುತ್ತಿದ್ದರು, ಜಿಟಿ ಜಿಟಿ ಮಳೆ, ಬರೋದು ಹೋಗೋದು ಮಾಡ್ತಾನೇ ಇತ್ತು. ಮಳೆ ಶುರುವಾಗುವುದಕ್ಕೆ ಮುಂಚೆಯೇ ಒಲೆ ಹಚ್ಚಿದ್ದರೂ, ಬಿದ್ದ ಮಳೆಗೆ ಇದ್ದ ಅಲ್ಪ ಸ್ವಲ್ಪ ಕಟ್ಟಿಗೆಯೂ ತೇವದ ಪಾಲಾಯ್ತು. ಪುಟ್ಟ, Organic ಮಹೇಂದ್ರ, ಕಿರಣ್, ವಿಜಯ್ ಬಹಳ ಕಷ್ಟ ಪಟ್ಟು ಊದಿ ಊದಿ ಮತ್ತೆ ಒಲೆ ಉರಿಯುವಂತೆ ಮಾಡಿದರು, ಪಟ್ಟಣಗೆರೆ ತನ್ನ ಕಲರ್ ಕೊಡೆಯಿಂದ ಒಲೆ ಮೇಲೆ ಮಳೆ ಬೀಳದ ಹಾಗೆ ಹಿಡಿದು ನಿಂತಿದ್ದ. ನೀರು ಮೊದಲೇ ಕಾದಿದ್ದರೂ ರಾಗಿ ಗಂಜಿ ಗಟ್ಟಿಯಾಗಲು ಬಹಳ ಸಮಯ ಹಿಡಿಯಿತು. ಚಾರಣದಲ್ಲಿ ಸಿಕ್ಕ ಮೊದಲ ಮಳೆಗೆ ಅದ್ಭುತವಾದ ಸ್ವಾಗತವನ್ನೇ ಕೋರಿದ್ದೆವು, 'ಮಲೆಗಳಲ್ಲಿ ಮದುಮಗಳು' ಕತೆಯಂತೆ ಆ ಸನ್ನಿವೇಶ ಭಾಸವಾಗುತ್ತಿತ್ತು. ಒಂದು ಕಡೆ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ, ಇನ್ನೊಂದು ಕಡೆ ಒಲೆ ಉರಿಸಲು ಸಾಹಸ, ಮತ್ತೊಂದು ಕಡೆ ಟೆಂಟ್ ಒಳಗೆ ಕೂತು ಕತೆ/ಹಾಡು ಹೇಳುತ್ತಿದ್ದವರು, ಕೆಲವರು ಬಂಡೆಯ ಕೆಳಗೆ ಕೂತೇ ಸುಮಾರು ಒಂದು ಗಂಟೆಯ ಕಾಲ ಇಡೀ ಮಳೆಯನ್ನು ಆನಂದಿಸಿದವರು. ಯಾರಾದರನ್ನು ಕೂಗಬೇಕೆಂದರೆ ಜೋರಾಗಿ ಕೂಗಬೇಕಿತ್ತು ಅಶ್ಟು ಮಳೆಯ ಸದ್ದಿತ್ತು. ಹೀಗೆ ನಾನಾ ತರದ ಚಿತ್ರಣಗಳಿಗೆ ಸಾಕ್ಶಿಯಾಗಿದ್ದು ಈ ಚಾರಣ. ಸುಮಾರು ಹೊತ್ತಿನ ನಂತರ ರಾಗಿ ಗಂಜಿ ರೆಡಿ ಆಯ್ತು. ಸಕ್ಕರೆ ಸಹಿತ-ರಹಿತ ೨ ತರದನ್ನು ಅದ್ಬುತವಾಗಿ ತಯಾರಿಸಿದ್ದರು. ಎಲ್ಲರಿಗೂ ಸಾಕಾಗುವಶ್ಟು ಆಯಿತು. ಮಳೆಯ ಆರ್ಬಟ ಇನ್ನೂ ನಿಂತಿರಲಿಲ್ಲ, ನಾವು ಮೊದಲೇ plan ಮಾಡಿದ ಹಾಗೆ, ಅನಕೃ ಬರಹಗಳ ಬಗ್ಗೆ ಚರ್ಚೆ ಮತ್ತು ಅನ್ನ ಮಾಡುವುದು ಹೇಗೆ ಅನ್ನೋದು ತಲೆಯಲ್ಲಿ ಸುತ್ತಾಡುತ್ತಿತ್ತು.

ಪುಟ್ಟ ಆ ಕಡೆ ಗಂಜಿ ಮಾಡಿದ ಪಾತ್ರೆ ತೊಳೆಯಲು ಹೋದರೆ, Organic ಮತ್ತು ಕೆಲವರು ಇನ್ನೊಂದು ಬಂಡೆಯ ಕೆಳಗೆ ಒಲೆ ಹತ್ತಿಸಲು ಪ್ರಯತ್ನಿಸುತ್ತಿದ್ದರೂ ಕಟ್ಟಿಗೆ ನೆಂದಿದ್ದರಿಂದ ಯಾಕೋ ಅನುಮಾನ ಶುರು ಅಯ್ತು, Organic ಕೊಟ್ಟ ಸಲಹೆಯಂತೆ ಈ ಕಡೆ ಮೊದಲು ನೋಡಿದ್ದ ಜಾಗ ನೋಡೋಣ ಎಂದು ನಾನು, ಮಂಜು ಹೊರಟೆವು, ಯಾವ ದಾರಿಯೂ ಕಾಣುತ್ತಿಲ್ಲ, ಮಂಜು ತುಂಬಿ ಹೋಗಿದೆ, ನೆಲ ಜಿನುಗಿದೆ, ಕತ್ತಲು ಕವಿದಿದೆ, ಕೈಯಲ್ಲಿರುವ ಬೆಳಕು ಒಂದೇ ನಮ್ಮ ಕಾಲುಗಳನ್ನು ದಾರಿಯ ಕಡೆಗೆ ನಡೆಸಬೇಕಿತ್ತು. ೫ ನಿಮಿಶದ ದಾರಿಗೆ ೧೫ ನಿಮಿಶ ತೆಗೆದುಕೊಂಡೆವು. ಅಲ್ಲಿ ಹೋಗಿ ನೋಡಿದರೆ ಅಲ್ಲಿಯೂ ನೀರು ಹರಿದು ಒದ್ದೆಯಾಗಿತ್ತು, ಕುಳಿತು ಮಾತನಾಡಲು ಸಾಧ್ಯವಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಬಂದೆವು. ಆದರೆ ನಾವು ಟೆಂಟ್ ಹಾಕಿದ್ದ ಜಾಗದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬುದು ತಿಳಿದು, ಅರುಣ್ ರವರ ಸಲಹೆಯಂತೆ ಎಲ್ಲರೂ ಗುಡಿಯ ಕಡೆಗೆ ಸಾಲಾಗಿ ಹೆಜ್ಜೆ ಹಾಕಿದೆವು.

ಹುಲುಕಡಿಯಲ್ಲಿ ಅನಕೃ, ಬೀಚಿ 
------------------------------------------
ಗುಡಿಯ ಒಳಗೆ ೪೫-೫೦ ಜನ ಕುಳಿತು ಮಾತನಾಡುವಶ್ಟು ಜಾಗವಿತ್ತು. ಎಲ್ಲರೂ ಸಾವಧಾನವಾಗಿ ಕುಳಿತರು. ಅನಕೃ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಮತ್ತು ದಿನಬಳಕೆಯಲ್ಲಿ ಕನ್ನಡದ ಬಗ್ಗೆ ಮಾತು ಶುರು ಆಯ್ತು. ಅನಕೃರಿಂದ ಪ್ರಭಾವಕ್ಕೊಳಗಾದ ಬೀಚಿಯೂ ಕೂಡ ಮಧ್ಯದಲ್ಲಿ ಬಂದರು. ಶಿವಪ್ರಸಾದ್ ಹೇಳಿದ 'ಶಾಲೆಯಲ್ಲಿ ಧನಸ್ಸು ಮುರಿದ ಕತೆ' ಎಲ್ಲರಿಗೂ ಹಿಡಿಸಿತು. ಹೊರಗಿನ ಪಡಸಾಲೆಯಲ್ಲಿ ಅರುಣ್ ಅವರು ಕೊಟ್ಟ stove ಹಚ್ಚಿ ಕಿರಣ್, ನಿತ್ಯಾನಂದ್ ಮತ್ತು Organic ಅನ್ನ ಮಾಡಲು ಶುರು ಮಾಡಿದರು. ಗಡಿಬಿಡಿಯಲ್ಲಿ ಅಕ್ಕಿ ಜಾಸ್ತಿ ಹಾಕಿದ್ದರಿಂದ ಅನ್ನ ಉಕ್ಕುವ ಮಟ್ಟಕ್ಕೆ ಬಂದಾಗ ಅರ್ಧ ತೆಗೆದು ಬೇರೆ ಪಾತ್ರೆಗೆ ಹಾಕಿಟ್ಟು ಮತ್ತೆ ಅದನ್ನು ಬೇಯಿಸುವ ಕೆಲಸ ನೋಡುತ್ತಿದ್ದಾಗ, ಅಶ್ಟೊತ್ತು ಮಳೆ enjoy ಮಾಡಿದ್ದ ನನಗೆ ಇವರ ಕೆಲಸ ನೋಡಿ ಮಳೆಯಿಂದ ಸ್ವಲ್ಪ ತೊಂದರೆ ಆಗಿದ್ದು ಅರಿವಿಗೆ ಬಂತು. ಊಟ ready ಆದರೂ ಚರ್ಚೆ ಇನ್ನೂ ಮುಂದುವರೆದಿತ್ತು. 'ಅನಕೃ'ರವರಿಂದ ಶುರು ಆದ ಮಾತು ಇವತ್ತಿನ ನಿಜ ಸ್ತಿತಿಗೆ ಬಂದಿತ್ತು.

Organic ಊಟ
--------------------
ರೊಟ್ಟಿ & ಪಲ್ಯ ವನ್ನು Organic, ಚಟ್ನಿ ಪುಡಿ, ಉಪ್ಪಿನಕಾಯಿ & ಮೊಸರನ್ನು ನಿತ್ಯಾನಂದ್ ವಹಿಸಿಕೊಂಡಿದ್ದರು. ಬಹುಶಃ ಎಲ್ಲಾ Organic ಇರಬಹುದು. Miss ಆಗಿ ದೀಪಕ್ ಕೂಡ ಮೊಸರು ತಂದಿದ್ದರಿಂದ ೮ ಲೀ ಆಗಿತ್ತು. ಆಗ ತಾನೆ ready ಆದ ಬಿಸಿ ಬಿಸಿ ಅನ್ನ, ಒಟ್ಟು ಎಲ್ಲವೂ ಸೇರಿಸಿ ಮೃಶ್ಟಾನ್ನ ಭೋಜನದ ತರಹ ಆಗಿತ್ತು. ಊಟ ಮಾಡುವಾಗ ಹೊರಗೆ ಕಣ್ಣು ಹಾಯಿಸಿದರೆ ಏನೇನು ಕಾಣುತ್ತಿಲ್ಲ, 'ನಾವು ಮೋಡದೊಳಗೋ, ಮೋಡ ನಮ್ಮೊಳಗೋ' ಅನ್ನುವ ತರಹ ಪೂರ್ತಿಯಾಗಿ ಮಂಜು ಕವಿದಿದೆ. ೩ ಮೀಟರ್ ದೂರದಲ್ಲಿದ್ದವರೂ ಕಾಣುತ್ತಿಲ್ಲ.ಊಟ ಮುಗಿಸಿ ಮತ್ತೆ ನಾವೆಲ್ಲ ಟೆಂಟ್ ಕಡೆ ಹೊರಟೆವು. ಗುಡಿಯ ಒಳಗೆ ಮಲಗಲು ಒಂದಶ್ಟು ಜನ ಉಳಿದುಕೊಂಡರು. ೧೮ ರಿಂದ ಹಿಡಿದು ೪೮ ವಯಸ್ಸಿನವರೆಗೂ ಸೇರಿ ಒಟ್ಟು ೪೬ ಜನ ನಮ್ಮ ಚಾರಣದಲ್ಲಿದ್ದರು.

ಪ್ಯಾರಾಚೂಟ್ ಟೆಂಟು
-------------------------------
ಟೆಂಟ್ ಬಳಿ ಬಂದು ಯಾವ್ಯಾವ ಟೆಂಟ್ ನಲ್ಲಿ ಎಶ್ಟು ಜನರಿದ್ದಾರೆ, ಎಲ್ಲರಿಗೂ ಆಗುತ್ತಾ ಎಂದು ಒಮ್ಮೆ ಪರಿಶೀಲಿಸಿ, ನಾವು ಸ್ವಲ್ಪ ಜನ ಒಂದೆಡೆ ಸೇರಿ ಇಬ್ಬನಿ, ಚಳಿಯನ್ನು ಆನಂದಿಸುತ್ತಾ ಕುಳಿತೆವು. ಕೆಲವರು ಗುಡಿ ಒಳಗೆ ಮಲಗಿದ್ದ ಕಾರಣ, ೧೦ ಟೆಂಟ್ ಗಳೇ ಸಾಕಾದವು, ಇನ್ನೊಂದು ನೆಂದಿದ್ದ ಟೆಂಟ್ ಗೆ ಹಾಸಿಗೆಯಾಯಿತು. ಆ ಕಡೆ ಖಾಲಿ ಇದ್ದ ಟೆಂಟ್ ಒಳಗೆ ನಾನು ಮತ್ತು ಕಿರಣ್ ಮಲೆನಾಡು ಮಲಗೋಣ ಎಂದು ನೋಡಿದಾಗ, ಆ ಜಾಗ ಹೇಗಿತ್ತೆಂದರೆ ಕತ್ತಲೆಯಲ್ಲಿ ನೋಡದೆ ಒಂದು ತುದಿಯಲ್ಲಿ ಹಾಕಿದ್ದೆವು. ಕಿರಣ್ ಅದನ್ನು ನೋಡಿ, ಅಕಸ್ಮಾತ್ ಆಗಿ ಜೋರಾಗಿ ಗಾಳಿ ಬೀಸಿದರೆ ಇದು ಪ್ಯಾರಾಚೂಟ್ ತರಹ ಹಾರಿ ಹೋಗುತ್ತದೆ, ಬೆಳಗ್ಗೆ ಒಳಗೆ ಬೆಂಗಳೂರು ಸೇರುತ್ತೇವೆ ಎಂದು ನಗೆ ಬಾಂಬ್ ಸಿಡಿಸಿದಾಗ ಎಲ್ಲರ ಮುಖದಲ್ಲಿ ಮಂದಹಾಸ. ವಿಜಯ್ ಹಾಕಿದ್ದ ಟೀ-ಶರ್ಟ್ ಮೇಲೆ 'ತರವಲ್ಲ ತಗಿ ನಿನ್ನ ತಂಬೂರಿ' ಅಂತಿದ್ದನ್ನು 'ತರವಲ್ಲ ತಗಿ ನಿನ್ನ ಟಮ್ಮಿ' ಎಂದು ಹಾಸ್ಯ ಮಾಡಿದ್ದು ಇದೇ ಕಿರಣ್. ಸುಮಾರು ಹೊತ್ತಿನ ಮಾತಿನ ನಂತರ ಟೆಂಟ್ ಸೇರಿಕೊಂಡೆವು. ಎಲ್ಲ ಮಲಗಿದ್ದರೂ ಗಿರೀಶ್ ಅವರ ಟೆಂಟ್ ಒಳಗೆ ತಿಥಿ ಚಿತ್ರದ ಗಡ್ಡಪ್ಪನ ವೀಡೀಯೋ ಸದ್ದು ಮಾಡುತ್ತಿತ್ತು. ಯಾರೂ, ನಿಮ್ಮಪ್ಪ - ಸೆಂಚುರಿ ಗೌಡ, ಆಯ್ತು - ಸರಿ ಬುಡು.

ಹುಲುಕಡಿ ಮಾತು - Coffee with Guide
---------------------------------------------------
ಬೆಂಗಳೂರಲ್ಲಿದ್ದಾಗ alarmನ snooze ಮಾಡಿ ಮಾಡಿ ಮಲಗುವ ನಾವು ಅಲ್ಲಿದ್ದಾಗ ಏಳಲೇ ಬೇಕಾಗುತ್ತದೆ. ಬೆಳಗ್ಗೆ ಎದ್ದು ಕಾಫಿ ಕಾಯಿಸುತ್ತಿರುವಾಗಲೇ ಸಿಂಹ entry ಕೊಟ್ಟ ಹಾಗೆ ನಮ್ಮ campಗೆ entry ಕೊಟ್ಟಿದ್ದು ಜಯಸಿಂಹ ಮತ್ತು ತಂಡ, ಬೆಳಗಿನ ಜಾವ ೪ಕ್ಕೆ ಎದ್ದು ಹುಲುಕಡಿ ಬೆಟ್ಟದ ಕಡೆಗೆ ಪಯಣ ಬೆಳೆಸಿದ್ದರು. ಕಾಫಿ ಕುಡಿಯುತ್ತಲೇ ಚಿಕ್ಕದಾಗಿ ಎಲ್ಲರ ಪರಿಚಯ ಮುಗಿಯಿತು. ಅರುಣ್ ರವರು ಹುಲುಕಡಿ ಬೆಟ್ಟದ ಬಗ್ಗೆ ಸುದೀರ್ಘವಾಗಿ ಮಾತಾಡಿದರು. ಅದರ ಇತಿಹಾಸದ ಬಗ್ಗೆ, ಭೌಗೋಳಿಕ ಪ್ರದೇಶದ ಬಗ್ಗೆ, ವೀರಭದ್ರ ಸ್ವಾಮಿಯ ಬಗ್ಗೆ, ಕೋಟೆಯ ಬಗ್ಗೆ, ಅದನ್ನಾಳಿದ ಸಾಮಂತರ ಬಗ್ಗೆ ಮಾಹಿತಿ ಕೊಟ್ಟರು. ಕೋಟೆಯ ಸುತ್ತ ಒಂದು ಸುತ್ತು ಬರುವಾಗ ಬಹಳ ವಿಶಯ ತಿಳಿಸಿಕೊಟ್ಟರು.

ನೆನಪಿನ ಕಜ್ಜಾಯ
-------------------------
ಸಮಯ ಆಗಲೇ ೧೦ ದಾಟಿದ್ದರಿಂದ ಕೆಳಗಿಳಿಯಲು ಅಣಿಯಾದೆವು. ನಾವು ತೆಗೆದುಕೊಂಡು ಹೋಗಿದ್ದ ಪೇಪರ್-ಪ್ಲಾಸ್ಟಿಕ್ ಎಲ್ಲವನ್ನೂ ಒಂದು ಬ್ಯಾಗಿಗೆ ತುಂಬಿಸಿದೆವು. ಈ ಸಲ ಪೇಪರ್-ಪ್ಲಾಸ್ಟಿಕ್ ಬಳಕೆ ಕಮ್ಮಿ ಆಗಲೆಂದು ಶಿವಪ್ರಸಾದ್ ಬಾಳೆ ಎಲೆ ವ್ಯವಸ್ತೆ ಮಾಡಿದ್ದರು. ನಾವು ಅಲ್ಲಿಗೆ ಹೋದಾಗ ಆ ಜಾಗ ಹೇಗಿತ್ತೋ, ಅಲ್ಲಿಂದ ಹೊರಡುವಾಗಲೂ ಹಾಗೆಯೇ ಇತ್ತು. ಕೋತಿಗಳ ಗುಂಪು ನಾವು ಇದ್ದ ಕಡೆ ದಾಳಿ ಮಾಡಿತ್ತು, ಪುಣ್ಯಕ್ಕೆ ರಾತ್ರಿ ಇವುಗಳು ನಮಗೆ ತೊಂದರೆ ಕೊಡಲಿಲ್ಲ. ಈಗ ನಾವು ಇಳಿಯುತ್ತಿದ್ದ ದಾರಿ ಈ ಬೆಟ್ಟದ ಇನ್ನೊಂದು ದಾರಿ, ನೀರು ಹರಿದು ಜಾರುತ್ತಿದ್ದ, ಮೆಟ್ಟಿಲುಗಳಿಲ್ಲದ, ಕಡಿದಾದ, ಇಳಿಜಾರು ದಾರಿ. ಎಶ್ಟೇ ಹುಶಾರಾಗಿ ಹೆಜ್ಜೆ ಇಟ್ಟರೂ ನಾನು ಒಂದು ಕಡೆ, ಪುಟ್ಟ ಒಂದು ಕಡೆ ನೆನಪಿಗಾಗಿ ಕಜ್ಜಾಯ ತೆಗೆದುಕೊಂಡೆವು, ಗೊತ್ತಿಲ್ಲದೆ ಅದೆಶ್ಟು ಜನ ತೆಗೆದುಕೊಂಡರೋ ತಿಳಿಯದು. ಬೆಟ್ಟವನ್ನು ಸುತ್ತಿಳಿದು, ಹೊಲ, ಪೊದೆಗಳನ್ನು ದಾಟಿ ಬುಡ ತಲುಪಿದೆವು. ತಿಂಡಿಗಾಗಿ ಕಾಯುತ್ತಾ ಎಲ್ಲರೂ ಕುಳಿತಿದ್ದರು. 

ಒಬ್ಬಟ್ಟಿನ ಹಗರಣ
--------------------------
ತಿಂಡಿ ಬಂದ ನಂತರ ಎಲ್ಲರೂ ತಿಂದು ಮುಗಿಸಿದೆವು, ಅದೇ ಸಮಯಕ್ಕೆ ಆ ಕಡೆ 'ಅನ್ನ ದಾಸೋಹದ ಮಹಾಮನೆ'ಯಲ್ಲಿ ಒಬ್ಬಟ್ಟು ಮಾಡ್ತೀರೋ ವಿಶಯವನ್ನು ಯಾರೋ ಹೇಳಿದರು, ಅಲ್ಲಿ ನಾಲ್ಕಾರು ಜನ ಹೋಗಿ ಒಬ್ಬಟ್ಟು ಮಾಡುತ್ತಿದ್ದವರ ಜೊತೆ ಮಾತನಾಡುತ್ತ ಒಬ್ಬಟ್ಟಿಗಾಗಿ ಕಾಯುತ್ತಾ ನಿಂತಿದ್ದರು. ನಾನೂ ಹೋಗಿ ನೋಡಿದವನು ಒಬ್ಬಟ್ಟು ಸಿಗೋಕೆ ಸಾಧ್ಯನೇ ಇಲ್ಲ ಅಂತ ಬಂದು ಕೈ ತೊಳೆದೆ. ಅದೇ ಸಮಯಕ್ಕೆ ಇವರೆಲ್ಲರ ಕೈಯಲ್ಲಿ ಒಬ್ಬಟ್ಟು. Organic ಬಂದು ನನಗೂ ಅರ್ಧ ಒಬ್ಬಟ್ಟು ಕೊಟ್ಟರು. ಬೇರೆ ಯಾರ್ಯಾರು ಎಶ್ಟು ತಿಂದರೋ ತಿಳಿಯದು, ಇದು ಒಂದು ತರ ಹಗರಣವೇ ಆಗಿ ಹೋಯ್ತು. ಅಷ್ಟರಲ್ಲಾಗಲೇ ಜಯಸಿಂಹ ಮತ್ತು ತಂಡ ಬೆಂಗಳೂರಿನ ಕಡೆಗೆ ತೆರಳಿದ್ದರು.

ವಿಸ್ಮಯ
------------
ಎಲ್ಲ ಹೊರಡುವ ವೇಳೆಗೆ ರಂಗನಾಥ್ ರವರ 'ಮಗು' ಬೈಕು ಕೈ ಕೊಟ್ಟಿತ್ತು. ರಾತ್ರಿ ಬೀಸಿದ ಗಾಳಿಗೆ ಕೆಳಗೆ ಬಿದ್ದು ಪೆಟ್ರೋಲ್ ನ ಹರಿವಿನಿಂದ ಏನೋ ಸಮಸ್ಯೆಯಾಗಿತ್ತು. ಎಲ್ಲರಿಗೂ ಬೀಳ್ಕೊಟ್ಟು ನಾವು ಹೊರಡುವಾಗ ಸಮಯ ೧ ಗಂಟೆ. ಪುಟ್ಟ, ಪಟ್ಟಣಗೆರೆ, ಕಿರಣ್ ಮತ್ತು ನಾನು ಕಡೆಯಲ್ಲಿ ಖಾಲಿ ರಸ್ತೆಯಲ್ಲಿ ಪಟ, ಸೆಲ್ಫಿ ತೆಗೆದುಕೊಂಡು ಬೆಂಗಳೂರಿನ ಕಡೆ ಹೊರಟೆವು. ಮಧ್ಯ ದಾರಿಯಲ್ಲಿ ಅಲ್ಲೆಲ್ಲೋ ಒಂದು ಕಡೆ ಗಾಡಿ ನಿಲ್ಲಿಸಿದಾಗ, ಕಿರಣ್ ಬಂದು ಕೈ ತೋರಿಸಿದರು, ಕೈಯೆಲ್ಲಾ ರಕ್ತವಾಗಿತ್ತು. ಆದರೆ ಅದು ರಕ್ತವಾಗಿರಲಿಲ್ಲ, ಸಾಗುವಾನಿ ಮರದ ಎಲೆಯನ್ನು ಉಜ್ಜಿದಾಗ ಆ ಬಣ್ಣಕ್ಕೆ ಬರುತ್ತದೆ. ಇದೂ ಒಂದು ವಿಸ್ಮಯ. ನಿಸರ್ಗದ ಚಿಕ್ಕ ಚಿಕ್ಕ ವಿಶಯಗಳಲ್ಲೂ ವಿಸ್ಮಯ ಲೋಕವೇ ಇರುತ್ತದೆ ಎಂಬ ತೇಜಸ್ವಿ ಮಾತು ಖಂಡಿತ ನಿಜ. ಮಳೆ ಬರುವ ಮುಂಚೆ ಮನೆ ಸೇರೋಣವೆಂದು ಬೇಗ ಬೇಗ ಗಾಡಿ ಚಲಿಸಿದೆವು.