ಹೊಯ್ಸಳರಲ್ಲಿ ಪ್ರಸಿದ್ದನಾದ ದೊರೆ ವಿಷ್ಣುವರ್ಧನ . ಈತನ ಪತ್ನಿಯೇ ಶಾಂತಲೆ.ಮಂತ್ರಿ ಗಂಗರಾಜು.ಶಾಂತಲೆಯು ಭರತ ನಾಟ್ಯ ಪ್ರವೀಣೆ.ಶಿವಗಂಗೆಯ ದೇವಿಯ ದೇವಸ್ಥಾನದಲ್ಲಿ ಪ್ರತಿ ದಿನ ಅವಳು ನಾಟ್ಯ ವಾಡುವುದು ಅವಳ ದಿನ ನಿತ್ಯದ ಅಭ್ಯಾಸ. ಒಂದು ದಿನ ತನ್ನ ಮಂತ್ರಿಯೊಂದಿಗೆ ಹೊರ ಸಂಚಾರಕ್ಕೆ ಬಂದಿದ್ದ ವಿಷ್ಣುವರ್ಧನ ಆ ದಿನ ಇಳಿ ಹೊತ್ತಾದ್ದರಿಂದ ಶಿವಗಂಗೆಯ ಹತ್ತಿರ ತಂಗಿರುತ್ತಾನೆ.
ಹಾಗೆಯೇ ಮಲಗಿರುವಾಗ ಬೆಟ್ಟದ ಮೇಲಿಂದ ಕೇಳಿ ಬರುತ್ತಿದ್ದ ಗೆಜ್ಜೆಯ ಸದ್ದಿಗೆ ಮನ ಸೋಲುತ್ತಾನೆ. ನಂತರ ಮಂತ್ರಿಗೆ ಇದರ ಮಾಹಿತಿ ತಿಳಿದು ಬರಲು ಕಳಿಸುತ್ತಾನೆ. ತಿರುಗಿ ಬಂದ ಗಂಗರಾಜನ ಮಾತನ್ನು ಕೇಳಿ ಆಶ್ಚರ್ಯಚಕಿತನಾಗಿ ಅವನು ಸಹ ಬೆಟ್ಟದೆಡೆಗೆ ಧಾವಿಸುತ್ತಾನೆ. ಅವಳ ನಾಟ್ಯಕ್ಕೆ ಮನಸೋತ ವಿಷ್ಣುವರ್ಧನನು ಅವಳ ಮೋಹಕ್ಕೆ ಬಲಿಯಾಗಿ ಅವಳನ್ನು ಪ್ರೀತಿಸಿ ಅವಳನ್ನೇ ವಿವಾಹವಾಗಿ ಅವಳನ್ನೇ ಪಟ್ಟದರಸಿಯನ್ನಾಗಿ ಮಾಡಿಕೊಳ್ಳುತ್ತಾನೆ.
ತನ್ನ ಅರಮನೆಯಲ್ಲಿ ಹೀಗೇ ಅವಳ ನಾಟ್ಯ ಏರ್ಪಡಿಸುತ್ತಿರುತ್ತಾರೆ. ಒಂದು ದಿನ ಅವಳನ್ನು ನಾಟ್ಯ ಮಾಡುವಂತೆ ರಾಜನು ಕೇಳಿಕೊಳ್ಳುತ್ತಾನೆ. ಅವಳು ರಾಜನೂ, ಪತಿಯೂ ಆದ ವಿಷ್ಣುವರ್ಧನನ್ನು ಸಂತೋಷಪಡಿಸಲು ನೃತ್ಯ ಮಾಡಲು ಒಪ್ಪುತ್ತಾಳೆ . ಅದಕ್ಕೆ ಬೇಕಾದ ವ್ಯವಸ್ಥೆಗಳೆಲ್ಲವನ್ನು ವಿಷ್ಣುವರ್ಧನನು ಸಿದ್ದಪಡಿಸುತ್ತಾನೆ. ಅವಳ ಮೋಹಕವಾದ ನೃತ್ಯಕ್ಕ ಎಲ್ಲರೂ ಮನಸೋಲುತ್ತಾರೆ. ಅವಳ ನೃತ್ಯ ಎಲ್ಲರ ನಯನಗಳನ್ನು ತುಂಬುತ್ತದೆ.
ಇದೆಲ್ಲದರ ಮಧ್ಯೆ ಒಬ್ಬ ಶಿಲ್ಪಿಯೂ, ಅದ್ಭುತ ಕಲೆಗಾರನೂ ಆದ ಜಕಣಾಚಾರಿಯು ಅವಳ ನೃತ್ಯ ನೋಡಿ ಅವಳ ನೃತ್ಯಕ್ಕೆ ಮನಸೋತು ಅವಳ ಮೇಲೆ ಮೋಹ ಉಂಟಾಗುತ್ತದೆ. ನಂತರ ಅವಳ ಹತ್ತಿರ ನಿನ್ನ ತರಹದ ಶಿಲ್ಪವೊಂದನ್ನು ಕೆತ್ತಬೇಕೆಂದಿದ್ದೇನೆ ಅದಕ್ಕೆ ನಿನ್ನ ಒಪ್ಪಿಗೆ ಇದೆಯೇ?? ಎಂದು ಕೇಳುತ್ತಾನೆ. ಅವಳೂ ಹಿಂದೂ ಮುಂದೆ ನೋಡದೆ ವಿಷ್ಣುವರ್ಧನನ ಅನುಮತಿಯೂ ಇಲ್ಲದೆ ನೇರವಾಗಿ ಒಪ್ಪಿಕೊಳ್ಳುತ್ತಾಳೆ. ಇದರಿಂದ ಅವಳು ರಾಜನ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ರಾಜನು ಇದಕ್ಕೆ ಸುತರಾಂ ಒಪ್ಪುವುದಿಲ್ಲ. ಆದರೆ ಅವಳು ರಾಜನ ಮಾತನ್ನು ದಿಕ್ಕರಿಸುತ್ತಾಳೆ . ರಾಜನಿಗೆ ಗೊತ್ತಿಲ್ಲದ ಹಾಗೆ ಜಕಣಾಚಾರಿಯನ್ನು ಭೇಟಿ ಮಾಡಿ ನೃತ್ಯ ಪ್ರದರ್ಶನದ ಭಂಗಿಗಳನ್ನು ನೀಡಿ ಶಿಲಾಬಾಲಕಿಯ ರೂಪು ಕೊಡಲು ಜಕಣಾಚಾರಿಗೆ ನೆರವಾಗುತ್ತಾಳೆ.ಮಂತ್ರಿ ಗಂಗರಾಜನ ಮೂಲಕ ವಿಷಯ ತಿಳಿದು ರಾಜನು ಅವಳನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ.ರಾಜನು ಶಾಂತಲೆಯನ್ನು ದ್ವೇಷಿಸಲು ಆರಂಭವಾದ ನಂತರ ಅವಳು ತನ್ನ ಆಹಾರವನ್ನು ತೊರೆದು ಉಪವಾಸ ಪ್ರಾರಂಭಿಸುತ್ತಾಳೆ. ನಂತರ ಅವಳು ಒಂದು ದಿನ ತನ್ನ ತವರೂರಾದ ಶಿವಗಂಗೆಯ ಸ್ವಾಮಿಯ ದರ್ಶನ ಪಡೆಯಲೋಸುಗ ಶಿವಗಂಗೆ ಬೆಟ್ಟವನ್ನು ಏರುತ್ತಾಳೆ . ಅಲ್ಲಿ ಸ್ವಾಮಿಯ ದರ್ಶನ ಪಡೆದ ನಂತರ ಒಂದು ಕಡಿದಾದ ಜಾಗದಿಂದ ಬಿದ್ದು ಅಸು ನೀಗುತ್ತಾಳೆ. ಆ ತುತ್ತ ತುದಿಯೇ ಇಂದಿನ ಶಾಂತಲ ಡ್ರಾಪ್.
ಆದರೆ ಇತ್ತ ಜಕಣಾಚಾರಿಯು ಅವಳ ಶಿಲ್ಪವನ್ನು ಅವಳು ಸಾಯುವ ಹಿಂದಿನ ದಿನವೂ ಕೆತ್ತುತ್ತಿದ್ದನೆಂದು ತಿಳಿದು ಬರುತ್ತದೆ. ಜಕಣಾಚಾರಿ ನಿರ್ಮಿಸಿದ ಬೇಲೂರು, ಹಳೇಬೀಡು ದೇವಸ್ಥಾನಗಳಲ್ಲಿ ಕಂಡು ಬರುವ ಬೇಲೂರು ಶಿಲಾಬಾಲಿಕೆ, ಸರಸ್ವತಿ, ಲಕ್ಷ್ಮಿ, ಗಜಗೌರಿ ಈ ಶಿಲ್ಪಗಳೆಲ್ಲವೂ , ಜಕಣಾಚಾರಿಗೆ ಶಾಂತಲೆಯಿಂದ ಬಂದ ಸ್ಪೂರ್ತಿಯೇ ಕಾರಣ ಎಂಬ ಪ್ರತೀತಿಯಿದೆ.
ಈಗಲೂ ಸಹ ಬೇಲೂರಿನ ಚನ್ನಕೇಶವನ ದೇವಾಲಯದಲ್ಲಿ ಆ ಮೂರ್ತಿಯನ್ನು ಕಾಣಬಹುದು ಮತ್ತು ದೇವಸ್ಥಾನದ ಸುತ್ತಲಿನ ಕೆತ್ತನೆಯಲ್ಲಿ ಶಾಂತಲೆಯ ಅನೇಕ ಭಂಗಿಗಳನ್ನೂ ,ಕೂದಲಿನ ವಿವಿಧ ವಿನ್ಯಾಸಗಳ ಭಂಗಿಗಳನ್ನೂ ಕಾಣಬಹುದು. ಅವಳ ಸ್ಪೂರ್ತಿಯಿಂದ ಜಕಣಾಚಾರಿಯ ಕೈಯಿಂದ ಮೂಡಿ ಬಂದ ಆ ಸುಂದರ ಮೂರ್ತಿಯೇ ಇಂದಿನ ಬೇಲೂರಿನ ಶಿಲಾಬಾಲಿಕೆ. ಆ ಮೂರ್ತಿಯಲ್ಲಿ ಸಾಕಷ್ಟು ಕುಸುರಿ ಕೆಲಸಗಳಿವೆ. ಒಂದು ಸಲ ಅದನ್ನು ನೋಡಿ ಕಣ್ತುಂಬಿಸಿ, ಮುಟ್ಟಿ ಧನ್ಯವಾದವರೇ ಪುಣ್ಯವಂತರು. ಅಂದ ಹಾಗೆ ನಾನು ಇಲ್ಲಿ ಹೇಳ ಹೊರಟಿದ್ದು ಶಾಂತಲ ಡ್ರಾಪ್ ಬಗ್ಗೆ.
ಶಾಂತಲ ಡ್ರಾಪ್ ಅನ್ನು ಹತ್ತುವುದು ಸುಲಭದ ಕೆಲಸವಲ್ಲ ಸಮುದ್ರ ಮಟ್ಟದಿಂದ ಬಹು ಎತ್ತರದಲ್ಲಿರುವ ಈ ಶಾಂತಲ ಡ್ರಾಪ್ ತಲುಪಲು ಬಹುವಾಗಿ ಸರ್ಕಸ್ ಮಾಡಬೇಕಾಗುತ್ತದೆ. ಸರಿಯಾಗಿ ಮೆಟ್ಟಿಲು ಇಲ್ಲದ ಜಾಗದಲ್ಲಿ ಬಹು ಎಚ್ಚರವಾಗಿ ಸಾಗಬೇಕಾಗುತ್ತದೆ. ಮೆಟ್ಟಿಲುಗಳಿದ್ದರೂ ಸಹ ಬಹು ಕಡಿದಾಗಿರುವ ಕಾರಣ ಜಾಗ್ರತೆಯಿಂದ ದಾರಿ ಸಾಗಬೇಕಾಗುತ್ತದೆ. ಮಳೆ ಬಂದರಂತೂ ದಾರಿ ಕಷ್ಟದ ಕೆಲಸ. ಮೇಲಕ್ಕೆ ಮೇಲಕ್ಕೆ ಸಾಗುತ್ತಿದ್ದಂತೆ ಬಹು ದೂರದ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ತುದಿಯಿಂದ ಭೂಮಿಯನ್ನು ನೋಡಿದಾಗ ಉಪಗ್ರಹ ದೃಶ್ಯದ (Satellite View ) ದರ್ಶನವಾಗುತ್ತದೆ.
ಈಗ್ಗೆ 4 ವರ್ಷಗಳ ಹಿಂದೆ ಗೆಳೆಯರೆಲ್ಲರ ಜೊತೆಗೂಡಿ ಮಳೆಯಲ್ಲಿ ಶಿವಗಂಗೆ ಬೆಟ್ಟವೇರಿ ಶಾಂತಲ ಡ್ರಾಪ್ ಅನ್ನು ನೋಡಿ ಕಣ್ತುಂಬಿಕೊಂಡು ಸವಿದ ಸುಂದರ ಕ್ಷಣಗಳು ಈಗ ಸುಮಧುರ ನೆನಪುಗಳು. ಮತ್ತೆ ಮತ್ತೆ ನೋಡಬೇಕಿನ್ನಿಸುವ ಶಾಂತಲ ಡ್ರಾಪ್ ತುಮಕೂರಿಗೆ ಹೋಗುವಾಗೆಲ್ಲ ಕೈ ಬೀಸಿ ಕರೆಯುತ್ತದೆ. ತುಮಕೂರು- ಬೆಂಗಳೂರು ಹೆದ್ದಾರಿಯಲ್ಲಿ ಸಿಗುವ ದಾಬಸ್ ಪೇಟೆಯಲ್ಲಿ ಇಳಿದು ಆಟೋ ಅಥವಾ ಟೆಂಪೋದ ಮೂಲಕ ಅರ್ಧ ಗಂಟೆಯಲ್ಲಿ ಶಿವಗಂಗೆ ತಲುಪಬಹುದು...Anyhow plan for a small picnic to SHANTHALA DROP @ Shivaganga..Have a Nice Journey.



