Saturday, March 12, 2016

ಕಿರಗೂರಿನ ಗಯ್ಯಾಳಿಗಳು



- ಚಿತ್ರ ಶುರು ಆಗೋದೆ ಗೊತ್ತಾಗೊಲ್ಲ, ಕಾರಣ ಎಂದಿನಂತೆ ಬ್ಯಾನರ್, ಹೀರೋ, ಹೀರೋಯಿನ್ ಗಳ ಎಂಟ್ರಿ ಸದ್ದಿಲ್ಲ. ಸೈಲೆಂಟ್ ಆಗಿ ಹೆಸರು ತೋರಿಸಿ ಮುಗಿದು ಹೋಗುತ್ತದೆ. ಮೋಡ, ಹಸಿರು ತೋರಿಸಿ ಕೆಳಗಿಳಿಯುವ ಕ್ಯಾಮೆರಾ ಸೀದಾ ಕೆರೆ ಹತ್ತಿರ ಬಟ್ಟೆ ತೊಳೆಯುತ್ತಿರುವ ಗಯ್ಯಾಳಿಗಳ ಮಾತುಕತೆಯಿಂದ ಶುರು ಅಗುತ್ತದೆ.

ರಾಗಿ ತೂರುತ್ತಿದ್ದ ಗಯ್ಯಾಳಿಯೊಬ್ಬಳ ಸೆರಗು ಹಾರಿಸಿ ಇಬ್ಬರು ಗಯ್ಯಾಳಿಗಳ ಜಗಳ, ಹೊಡೆದಾಟಕ್ಕೆ ಕಾರಣವಾಗುವುದು ಬುಮ್ ಎಂದು ಬೀಸುವ ಬಿರುಗಾಳಿ.ಬಿರುಗಾಳಿ ಬೀಸಿದ ವೇಗಕ್ಕೆ ಅದೇಗೆ ಸೆರಗು ಹಾರಿತು ಅನ್ನುವುದೇ ಇನ್ನೊಬ್ಬ ಗಯ್ಯಾಳಿಯ ನಗು,ದೊಡ್ದ ಹೊಡೆದಾಟಕ್ಕೆ ಕಾರಣವಾಗುತ್ತದೆ, ಇದೇ ಈ ಚಿತ್ರದ ಗಯ್ಯಾಳಿಗಳಿಬ್ಬರ ನಡುವೆ ನಡೆಯುವ ಮೆಘಾ ಫೈಟ್.

ಮತ್ತೊಂದು ಕಡೆ, ಬೀಸಿದ ಬಿರುಗಾಳಿಗೆ ಬಿದ್ದ ಮರ ಕಡಿಯಲು ನಡೆಯುವ ಚೌಕಾಸಿ.ಮರ ಬೀಳುವ ತನಕ ಒಂದು ಲೆಕ್ಕ, ಬಿದ್ದ ಮೇಲೆ ಇನ್ನೊಂದು ಲೆಕ್ಕ. ಅನ್ಯೋನ್ಯವಾಗಿ ಬದುಕುತ್ತಿದ್ದವರ ನಡುವೆ ಜಾತಿ ಜಗಳ ತಂದಿಡುವ ಜೀವಂತ ದಯ್ಯಾತ್ಮಗಳು. ನಂಬಿಸಿ ಮೋಸ ಮಾಡುವ ಪೋಲೀಸ್ ವ್ಯವಸ್ಥೆ. ಸ್ತ್ರೀ ಶಕ್ತಿಯ ಮತ್ತೊಂದು ರೂಪ, ಗಯ್ಯಾಳಿಯಾಗಿ ರೌದ್ರಾವತಾರ. ಮಕ್ಕಳಾಗಿಲ್ಲವೆಂದು ಗಂಡನ ಬೈಗುಳ ಸಾಕಾಗಿ ಮನೆಗೆ ಬಂದ ಔಷಧಿ ಪಂಡಿತನ ಮೋಡಿಗೆ ಅವನ ಜೊತೆ ಪರಾರಿಯಾದ ನಾಗಮ್ಮ ಮತ್ತೆ ವಾಪಸ್ಸು ಬಂದಾಗ ನಡೆಯುವ ಪಂಚಾಯಿತಿ ಚಿತ್ರಣ ಮತ್ತಷ್ಟು ಹಿಡಿದಿಡುತ್ತದೆ.



ಮೇಲ್ಜಾತಿ- ಕೆಳ ಜಾತಿಗಳ ನಡುವೆ ಜಗಳ ತಂದಿಕ್ಕಿದ ಪಿತೂರಿಗಳೆಲ್ಲವೂ ಬಯಲಾಗುತ್ತದೆ, ಗೋಮುಖ ವ್ಯಾಘ್ರ ದ ಆಸಾಮಿಯನ್ನು ಗಯ್ಯಾಳಿಗಳು ಊರಿನಿಂದ ಆಚೆಗೆ ಓಡಿಸಿ, ಸಾರಾಯಿ ಅಂಗಡಿಗೆ ಬೆಂಕಿ ಇಡುವ ಮೂಲಕ ಚಿತ್ರಕ್ಕೆ ತೆರೆ ಬೀಳುತ್ತದೆ.

ತೇಜಸ್ವಿಗೆ ತೇಜಸ್ವಿಯೇ ಸಾಟಿ. ಸುಮನ್ ಕಿತ್ತೂರ್ ರವರು ಕತೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆಯೇ ಹೊರತು ಪೂರ್ತಿ ಕಟ್ಟಿ ಕೊಡಲಾಗಿಲ್ಲ. ಅದು ತೇಜಸ್ವಿಯೆಂಬ ಕನ್ನಡ ಸಾಹಿತ್ಯದ ದೊಡ್ಡಾನೆಯನ್ನು ಚಲನ ಚಿತ್ರವೊಂದರ ಫ್ರೇಮ್ ಒಳಕ್ಕೆ ಕೂರಿಸಲು ಸಾಧ್ಯವಿಲ್ಲವೆಂಬುದನ್ನು ತೋರಿಸುತ್ತದೆ.

ಕೆಲವೊಂದು ಕಡೆ ಸಾಕಷ್ಟು ದೃಶ್ಯಾವಳಿಗಳ ಅವಶ್ಯತಕತೆಯಿತ್ತು. ಕಾಡು, ಹಸಿರು ತೋರಿಸುವ ಕೆಲಸವಾಗಬೇಕಿತ್ತು. ಎಲ್ಲದಕ್ಕೂ ಬೀಪ್ ಕೊಟ್ಟಿರುವ ಸೆನ್ಸಾರ್ ಮಂಡಳಿ ತೇಜಸ್ವಿ ಬದುಕಿದ್ದರೆ ಬರೀ ಬೀಪ್ ಗಳನ್ನೇ ಕೇಳಬೇಕಿತ್ತು. ಗ್ರಾಮೀಣ ಸೊಗಡಿನ ನಿಜ ಮಾತುಗಳಿಗೆಲ್ಲಾ ಸೆನ್ಸಾರ್ ಒಂದು ಕಪ್ಪು ಚುಕ್ಕೆ.
ಇದೆಲ್ಲವನ್ನೂ ಒತ್ತಟ್ಟಿಗಿರಿಸಿ ಸಿನಿಮಾ ನೋಡಿದರೆ ಕಿರಗೂರಿನ ಗಯ್ಯಾಳಿಗಳು ಸೂಪರ್ ....