Monday, March 21, 2011

ನಾಗಲಾಪುರದ ಶಿಲ್ಪ ಕಲಾ ವೈಭವ

ತುರುವೇಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೇಘಟ್ಟ ಹೋಬಳಿಯ ನಾಗಲಾಪುರ ಹೊಯ್ಸಳರ ಶಿಲ್ಪಕಲೆಯ ಸಮೃದ್ದಿಯಿಂದ ತುಂಬಿದೆ. ನನ್ನ ಹುಟ್ಟುರಾದ ಮುದಿಗೆರೆಯಿಂದ ತೋಟದ ಸಾಲಿನ ಈ ಊರಿನ ಹಾದಿ ಹಿಡಿದರೆ ಗದ್ದೆ ಬಯಲು , ಕೆರೆಯ ಏರಿಯ ಮೂಲಕ ಅರ್ಧ ಗಂಟೆಯ ಕಾಲ್ನಡಿಗೆಯಲ್ಲಿ ನಾಗಲಾಪುರ ತಲುಪಬಹುದು.ನನ್ನ ಅಪರೂಪದ ಬಾಲ್ಯದ ದಿನಗಳನ್ನು  ಕಳೆದದ್ದು  ಇಲ್ಲಿಯೇ.ಅಂದರೆ ಇದು ನನ್ನ ಅಜ್ಜಿಯ ಊರು.

ಇದು ಹೊಯ್ಸಳರ ಕಾಲದಲ್ಲಿ ಒಂದು ಅಗ್ರಹಾರವಾಗಿದ್ದು ಇದಕ್ಕೆ ನಾಗಪುರಿ ಪಟ್ಟಣ ವೆಂಬ ಹೆಸರಿದ್ದು ಇಲ್ಲಿ ನಾಗರಾಜನೆಂಬ ರಾಜ ಆಳುತ್ತಿದ್ದನು ಎಂದು ತಿಳಿಯಲಾಗಿದೆ. ಇದು ಹಿಂದೆ ಒಂದು ವಿದ್ಯಾ ಕೇಂದ್ರವೂ  ಆಗಿತ್ತು .

ಇಲ್ಲಿ ಹೊಯ್ಸಳರ ರಾಜ ವೀರ ಬಲ್ಲಾಳನ ಕಾಲದಲ್ಲಿ ಶ್ರೀಚನ್ನಕೇಶವ ಮತ್ತುಶ್ರೀಕೇದಾರೇಶ್ವರ ದೇವಾಲಯಗಳನ್ನು ಸ್ಥಾಪಿಸಲಾಗಿದೆ. ಈ ದೇವಾಲಯಗಳ ನಿರ್ಮಾಣ ಕ್ರಿ.ಶ 13 ನೆ ಶತಮಾನದಲ್ಲಿ ಆಗಿದ್ದೆಂದು ಹೇಳಲಾಗಿದೆ. ಹೊಯ್ಸಳರ ರಾಜರುಗಳ ಕಾಲದ ದೇವಾಲಯಗಳು ಕಲಾತ್ಮಕವಾಗಿ ಮೂಡಿ ಬಂದಿವೆ.ಹಳೇಬೀಡು, ಬೇಲೂರು,ಸೋಮನಾಥಪುರ ದೇವಾಲಯಗಳ ಸಾಲಿಗೆ ಈ ದೇವಾಲಯಗಳೂ ಸಹ ಸೇರುತ್ತವೆ.

ಸೋಮನಾಥಪುರದ ದೇವಾಲಯವನ್ನು ಕಟ್ಟಿದಂತಹ ಶಿಲ್ಪಿ ಬೈಚೋದ ನಾಗಲಾಪುರದ ದೇವಾಲಯಗಳನ್ನು ಕಟ್ಟಿದ್ದಾನೆಂದು ಹೇಳಲಾಗಿದೆ. ಇವನ ಕಾಲ ಕ್ರಿ.ಶ 1268 .ಮಲ್ಲಿಕಾಫರನು ಬೇಲೂರು ಹಳೆಬೀಡಿನ ಮೇಲೆ ದಾಳಿ ಮಾಡಿದಾಗ ನಾಗಲಾಪುರದ ಮೇಲೂ  ದಾಳಿ ಮಾಡಿದನೆಂದು ಊಹಿಸಲಾಗಿದೆ. ಇದರಿಂದ ಸಾಕಷ್ಟು ವಿಗ್ರಹಗಳು ಮತ್ತು ಹೊರಗೋಡೆ ಹಾಳಾಗಿವೆ. ಒಂದೇ ವಿನ್ಯಾಸವುಳ್ಳ ಎರಡೂ ದೇವಾಲಯಗಳಲ್ಲಿ ಗರ್ಭಗೃಹ ,ಸುಖನಾಸಿ ಮತ್ತು ನವರಂಗಗಳಿವೆ. ಈ ಎರಡೂ ದೇವಾಲಯಗಳು ನಕ್ಷತ್ರಾಕಾರದ 16 ಮೂಲೆಗಳಿಂದ ಕೂಡಿದ ಜಗುಲಿಯ ಮೇಲೆ ನಿರ್ಮಾಣವಾಗಿವೆ.

ಚನ್ನಕೇಶವ ದೇವಾಲಯ ಊರಿನ ಪ್ರವೇಶ ಭಾಗದಲ್ಲಿದೆ. ಚನ್ನಕೇಶವ ದೇವಾಲಯದ ಪ್ರವೇಶ ದ್ವಾರ ಪೂರ್ವಾಭಿಮುಕವಾಗಿದ್ದು ಉತ್ತಮ ಕಲಾತ್ಮಕತೆಯಿಂದ ಕೂಡಿದೆ. ಶ್ರೀ ಚನ್ನಕೇಶವ ದೇವಾಲಯದಲ್ಲಿ ಶ್ರೀ ಚನ್ನಕೇಶವ ವಿಗ್ರಹ ಕಳುವು ಆಗಿದ್ದು ಅದೇ ಜಾಗದಲ್ಲಿ ವಿಜಯನಗರ ಅರಸರಿಂದ ಸ್ಥಾಪಿದವಾದ ಶ್ರೀ ವೆಂಕಟೇಶ್ವರ ವಿಗ್ರಹವಿದೆ.ಈ ದೇವಾಲಯದ ಹೊರಗೋಡೆಯ ಬುಡದಲ್ಲಿ ಆನೆ,ಕುದುರೆ, ಬಳ್ಳಿ,ಸುರುಳಿ, ಮಕರ ಮತ್ತು ಹಂಸಗಳ ಸಾಲನ್ನು ಕಲ್ಲಿನಲ್ಲಿ ಕಡೆದಿರುವ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಗೋಡೆಗಳ ಮೇಲ್ಭಾಗದಲ್ಲಿ ಕೆತ್ತಿರುವ ಅನೇಕ ಸುಂದರ ಮೂರ್ತಿಗಳು ನೋಡಲು ನಯನ ಮನೋಹರವಾಗಿವೆ. ಅವುಗಳಲ್ಲಿ ವಾಸುದೇವ,ನರಸಿಂಹ,ವರಹಾ ಲಕ್ಷ್ಮೀನಾರಾಯಣ , ಹಯಗ್ರೀವ, ಯೋಗನಾರಾಯಣ, ಬ್ರಹ್ಮ, ಇಂದ್ರ, ಲಕ್ಷ್ಮಿ, ದುರ್ಗೆ ,ಸರಸ್ವತಿ, ಮೋಹಿನಿ, ಮಹಿಷಾಸುರ ಮರ್ದಿನೀ ಅಷ್ಟೇ ಅಲ್ಲದೆ ಪುರಾಣಗಳಿಗೆ ಸಂಬಂಧಿಸಿದ ಅನೇಕ ಮೂರ್ತಿಗಳಿವೆ.ಇವುಗಳು ನೋಡಲು ಸುಂದರವಾಗಿಯೂ ಐತಿಹಾಸಿಕತೆಯನ್ನು ಪ್ರತಿಬಿಂಬಿಸುವಂತೆಯೂ ಇವೆ. ನವರಂಗದಲ್ಲಿ ಅಷ್ಟದಿಕ್ಪಾಲಕರ ನಡುವೆ ನೇತಾಡುವಂತಿರುವ ಕಮಲದ ಕೆತ್ತನೆ ಇದೆ. ಸುಖನಾಸಿಯಲ್ಲಿರುವ ದ್ವಾರಪಾಲಕರ ಭವ್ಯವಾದ ಕೆತ್ತನೆ ಇದೆ.

1.Hoysala's Insignia  2. Me and my friends behind Channakeshava temple  3. Sculpture of kedareshwara temple
ಇಲ್ಲಿರುವ ಕೇದಾರೇಶ್ವರ ದೇವಾಲಯವೂ ಹೊಯ್ಸಳರ ಕಾಲದ್ದು. ಇದರ ಪ್ರವೇಶದ್ವಾರವು ದಕ್ಷಿಣ ದಿಕ್ಕಿಗಿದೆ. ಆದರೆ ಕೇದಾರೇಶ್ವರ ಲಿಂಗವು ಪೂರ್ವಾಭಿಮುಕವಾಗಿ  ಇದೆ . ಈ ದೇವಾಲಯವನ್ನು ಬಳಪದ ಕಲ್ಲಿನಿಂದ ಕಡೆದಿದ್ದಾರೆ. ದೇವಾಲಯದಲ್ಲಿರುವ ಕೇದಾರೇಶ್ವರ ಲಿಂಗವು ಹಳೆಬೀಡಿನ ಕೇದಾರೇಶ್ವರ ಲಿಂಗದಂತಿದೆ. ಅಲ್ಲದೆ ಉಮಾಮಹೇಶ್ವರ, ವೃಷಭ ರೂಪ ಮೊದಲಾದ ಶಿವನ ವಿಶಿಷ್ಟ ಮೂರ್ತಿಗಳಲ್ಲದೆ  ಭೈರವ,ಅರ್ಜುನ,ಮನ್ಮಥ ಮೊದಲಾದ ವಿಶಿಷ್ಟ ಮೂರ್ತಿಗಳಿವೆ.ಬ್ರಹ್ಮ, ವಿಷ್ಣು, ಶಿವ ಇವರ ವಿವಿಧ  ಅವತಾರಗಳು, ತ್ರಿಪಾದ ಭಂಗಿ, ದುರ್ಗಾ, ಗಣಪತಿ, ತಾಂಡವೇಶ್ವರ, ಷಣ್ಮುಖ, ಕುಭೇರ, ವರುಣ ಮುಂತಾದ ವಿಗ್ರಹಗಳ ಕೆತ್ತನೆ ಕಲಾತ್ಮಕವಾದುದು.ಈ ಮೂರ್ತಿಗಳ ಮೇಲಿನ ಸಾಲಿನಲ್ಲಿ ತೋರಣದಂತಿರುವ ಒಂದು ಸಾಲು ಕಮಲದ ಮೊಗ್ಗುಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಎರಡೂ  ದೇವಾಲಯಗಳು ಒಳಾಂಗಣ ಅಲಂಕರಣಗಳು ಒಂದೇ ರೀತಿಯಲ್ಲಿದ್ದರೂ ಕೇದಾರೇಶ್ವರ ದೇವಾಲಯದ ಅಲಂಕರಣ ಹೆಚ್ಚು ಆಕರ್ಷಣೀಯವಾಗಿದೆ. ಗಣಪತಿ, ಬೃಹತ್ ನಂದಿ ,ತಿರುಗಣಿಯಲ್ಲಿ ಕಡೆದ ನವರಂಗದ ಕಂಬಗಳು ಮಣಿಹಾರಗಳು, ಕೀರ್ತಿಮುಖಗಳು ಬೋಧಿಗೆಯ ಸುತ್ತ ಮಣಿತೋರಣಗಳಿಂದ ತುಂಬಿ ಲಾವಣ್ಯ ಮಯವಾಗಿವೆ. ಆಳವಾದ ಭುವನೇ ಶ್ವರಗಳಿವೆ ನವರಂಗಗಳ ಒಳ ಚಾವಣಿಯ ಅಂಕಣಗಳು ಬಗೆ ಬಗೆಯ ಕುಸುರಿ ಕೆಲಸಗಳಿಂದ ತುಂಬಿದ್ದು ಅತ್ಯಂತ ಮನ ಮೋಹಕವಾಗಿವೆ. ಆದುದರಿಂದ ನಾಗಲಾಪುರವನ್ನು ಪುಟ್ಟ ಬೇಲೂರು ಎಂದೂ ಕರೆಯಲಾಗಿದೆ.

ಈ ದೇವಾಲಯಗಳು ಶಿಥಿಲವಾಗಿದ್ದರಿಂದ  ಕೇಂದ್ರ ಸರ್ಕಾರದ ಪ್ರಾಚ್ಯ ವಸ್ತು ಮತ್ತು ಸಂಶೋಧನಾ ಇಲಾಖೆಯ ನೇತೃತ್ವದಲ್ಲಿ ಇತ್ತೀಚೆಗ ಜೀರ್ಣೂದ್ದಾರ ಮಾಡಲಾಗಿದೆ. ಮತ್ತು ಹಾಳಾಗದಂತೆ ರಕ್ಷಣೆಯನ್ನು ಒದಗಿಸಿದೆ .

4 comments:

  1. Nice narrating with beautiful pictures… thank you for the infos.

    ReplyDelete
  2. Ha intha adbuthavada vishyagalanu namm jothe anchkondidakke nimage nan dhanyavadagalu.

    ReplyDelete
  3. @Harish:: nimagu kuda dhanyavadagalu harish avre..

    ReplyDelete